ಬಿಜೆಪಿ ಮಾಜಿ ಕಾರ್ಪೊರೇಟರ್ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಹೌಹಾರಿಹೋಗಿರುವ ಘಟನೆ ನಡೆದಿದೆ. ದಾಳಿ ವೇಳೆ ನಾಲ್ಕು ಮೊಸಳೆಗಳು ಪತ್ತೆಯಾಗಿವೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ನಾಯಕನ ಮನೆಯಲ್ಲಿಯೇ ಮೊಸಳೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ‘ಬೀಡಿ ತಯಾರಿಕೆ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಆಗಿರುವ ಬಿಜೆಪಿಯ ಮಾಜಿ ಕಾರ್ಪೋರೇಟರ್ ರಾಜೇಶ್ ಕೇಸರವಾಣಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಮೊಸಳೆಗಳು ಪತ್ತೆಯಾಗಿವೆ.
ಈ ಕುರಿತು ರಾಜೇಶ್ ಯಾವುದೇ ರೀತಿಯ ಮಾಹಿತಿ ನೀಡಿಲ್ಲವೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʼಮೊಸಳೆಗಳು ಇರುವ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಗಳನ್ನು ರಕ್ಷಣೆ ಮಾಡಲಾಗಿದೆ. ಬಿಜೆಪಿ ನಾಯಕ ರಾಜೇಶ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿ ಅಸೀಮ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಸದ್ಯ ಎಲ್ಲಾ ಮೊಸಳೆಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಶ್ರೀವಾಸ್ತವ್ ಹೇಳಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗುವುದು ಸಹಜ, ಆದರೆ ಬಿಜೆಪಿ ನಾಯಕನ ಮನೆಯಲ್ಲಿ ನಾಲ್ಕು ಮೊಸಳೆಗಳು ಪತ್ತೆಯಾಗಿರುವ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.
ರಾಜೇಶ್ 155 ಕೋಟಿ ತೆರಿಗೆ ವಂಚನೆ ಮಾಡಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿ 3 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನಾಭರಣ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿದ್ದ ಬಿಜೆಪಿಯ ಮಾಜಿ ಶಾಸಕರು ಬರೋಬ್ಬರಿ 140 ಕೋಟಿ ತೆರಿಗೆ ವಂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.