ಮೈಸೂರು: ವಿವಿಧ ಕಡೆಗಳಲ್ಲಿ ಮುಸುಕುಧಾರಿಗಳು ಅಟ್ಟಹಾಸ ಮುಂದುವರಿದಿದೆ. ಮೈಸೂರಿನಲ್ಲಿ ಸೋಮವಾರ ಮುಸುಕುಧಾರಿ ದರೋಡೆಕೋರರು ಗ್ಯಾಂಗ್ ಹಾಡಹಗಲೇ ಕಾರಿನ ಮೇಲೆ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ದರೋಡೆಕೋರರ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸರಣಿ ದರೋಡೆ ಕೃತ್ಯಗಳು ಜನರಿಗೆ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿವೆ.
ಸೋಮವಾರ ಬೆಳಗ್ಗೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ತೆರಳುತ್ತಿದ್ದ ಕೇರಳ ಮೂಲದ ಉದ್ಯಮಿಯ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮಾಲೀಕರ ಮೇಲೆ ಹಲ್ಲೆ ಮಾಡಿದ ಮುಸಕುಧಾರಿ ದರೋಡೆಕೋರರು ಹಣ ಕಿತ್ತುಕೊಂಡಿದ್ದಲ್ಲದೇ ಉದ್ಯಮಿ ಕಾರಿನ ಸಮೇತ ಪರಾರಿಯಾಗಿದ್ದಾರೆ.
ಬೇರೆ ಕಾರುಗಳಲ್ಲಿ ಬೆನ್ನಟ್ಟಿ ನಡು ರಸ್ತೆಯಲ್ಲಿ ಹಾಡಹಗಲೇ ಅಡ್ಡಿಗಟ್ಟಿದ ಮುಸುಕುಧಾರಿ ದರೋಡೆಕೋರರು ಏಕಾಎಕಿ ಉದ್ಯಮಿಯನ್ನು ಹೊರಕ್ಕೆಳೆದು ಹಲ್ಲೆ ಮಾಡಿದೆ. ದರೋಡೆಗೆ ಒಳಗಾದ ಕಾರಿನ ಒಳಕ್ಕೆ ಇಬ್ಬರೆ ಇದ್ದರು ಎಂಬ ಮಾಹಿತಿ ಇದೆ. ನಾಲ್ಕೈದು ಜನರ ದರೋಡೆ ಗುಂಪು ದಿಢೀರ್ ದಾಳಿಗೆ ಉದ್ಯಮಿ ಕಂಗಾಲಾಗಿದ್ದಾರೆ. ನೋಡ ನೋಡುತ್ತಲೇ ಹಲ್ಲೆಗೈದು, ಕಾರು ದೋಚಿ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ.
ಬೀದರ್‌ನಲ್ಲಿ ಎಸ್‌ಬಿಐ ಸಿಬ್ಬಂದಿಗೆ ಗುಂಡಿಕ್ಕಿದ್ದ ಶಸ್ತ್ರಸಹಿತ ದರೋಡೆಕೋರರು ಸುಮಾರು 94ಲಕ್ಷ ರೂಪಾಯಿ ಹಣ ದೋಚಿ ಬೈಕ್ ಮೇಲೆ ಪರಾರಿಯಾಗಿದ್ದರು. ಇದರ ಬೆನ್ನಲ್ಲೆ ಮಂಗಳೂರಿನಲ್ಲಿ ದರೋಡೆ ನಡೆದಿತ್ತು. ಇವರೆಡು ಸಿನಿಮೀಯ ರೀತಿಯಲ್ಲಿ ನಡೆದು ರಾಜ್ಯ ಜನರಿಗೆ ಅಚ್ಚರಿ ಮೂಡಿಸಿತ್ತು. ಇದು ನಿಜವಾ ಎನ್ನುವಷ್ಟರಲ್ಲಿ ದರೋಡೆಕೋರರ ದಾಳಿಗೆ ಹೆಣಗಳು ಬಿದ್ದಿದ್ದವು.