ಕೆ.ಆರ್.ಮಾರುಕಟ್ಟೆ ಗ್ಯಾಂಗ್ ರೇಪ್ ಕೇಸ್: ಆರೋಪಿಗಳ ಬಂಧನ

Spread the love

ಬಸ್‌ಗಾಗಿ ಕಾಯುತ್ತಿದ್ದ 37 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಗಳನ್ನು ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.ಆರೋಪಿಗಳನ್ನು ಗಣೇಶ್ (23) ಮತ್ತು ಶರವಣ (35) ಎಂದು ಗುರುತಿಸಲಾಗಿದೆ. ಇಬ್ಬರ ವಿರುದ್ಧ ಈಗಾಗಲೇ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳಿರುವುದಾಗಿ ತಿಳಿದುಬಂದಿದೆ.
ಜ.19ರಂದು ರಾತ್ರಿ ಸುಮಾರು 11.30ಕ್ಕೆ ಕೆ.ಆರ್.ಮಾರುಕಟ್ಟೆ ಗೋಡೌನ್ ಸ್ಟ್ರೀಟ್ ನಲ್ಲಿ ತಮಿಳುನಾಡು ಮೂಲದ 37 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, 650 ರೂ. ನಗದು, ಚಿನ್ನದ ತಾಳಿ, ಓಲೆ, ಬೆಳ್ಳು ಕಾಲು ಚೈನ್ ಹಾಗೂ ಮೊಬೈಲ್ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.
ಹಲವು ವರ್ಷಗಳಿ ಹಿಂದೆಯೇ ಕುಟುಂಬದಿಂದ ದೂರವಾಗಿರುವ ಇಬ್ಬರು ಆರೋಪಿಗಳು ಕೆ.ಆರ್.ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ಮಾರುಕಟ್ಟೆಯಲ್ಲಿಯೇ ಖಾಲಿ ಜಾಗಗಳಲ್ಲಿ ಮಲಗುತ್ತಿದ್ದರು ಎಂದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ವಿಶ್ಲೇಷಿಸಿದ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.ಇನ್ನು ಆರೋಪಿಗಳನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು, ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!